ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಅಡುಗೆಮನೆ ರಾಜಕಾರಣ:ನವಾಬ್ ಮಲಿಕ್ ವಿರುದ್ಧ ಎನ್‌ಸಿಬಿ ಅಧಿಕಾರಿ ಪತ್ನಿ ಆಕ್ರೋಶ

ಎನ್‌ಸಿಬಿ ಅಧಿಕಾರಿ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖ l ಸಚಿವ ನವಾಬ್ ಮಲಿಕ್‌ರಿಂದ ಬಹಿರಂಗ
Last Updated 26 ಅಕ್ಟೋಬರ್ 2021, 21:02 IST
ಅಕ್ಷರ ಗಾತ್ರ

ಮುಂಬೈ: ‘ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಹಲವಾರು ಅಮಾಯಕರನ್ನು ಸಿಲುಕಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ’ ಎಂದು ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಅಧಿಕಾರಿಯೊಬ್ಬರು ತಮಗೆ ಪತ್ರ ಬರೆದಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಮಂಗಳವಾರ ಹೇಳಿದ್ದಾರೆ. ಎನ್‌ಸಿಬಿ ಅಧಿಕಾರಿ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಅವರು ಬಹಿರಂಗಪಡಿಸಿದ್ದಾರೆ.

ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರನ್ನು ಡ್ರಗ್ಸ್‌ ಪ್ರಕರಣವೊಂದರಲ್ಲಿ ಎನ್‌ಸಿಬಿ ಬಂಧಿಸಿತ್ತು. ಅವರು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಹಡಗಿನಲ್ಲಿ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ ಅಧಿಕಾರಿಗಳ ತಂಡದ ಮುಖ್ಯಸ್ಥ ಸಮೀರ್ ವಾಂಖೆಡೆ ಮುಸ್ಲಿಮರಾಗಿದ್ದು, ಜಾತಿ ಪ್ರಮಾಣ ಪತ್ರಸೃಷ್ಟಿಸಿ ಕೆಲಸಕ್ಕೆ ಸೇರಿದ್ದಾರೆ ಎಂದು ಮಲಿಕ್ ಸೋಮವಾರವಷ್ಟೇ ಆರೋಪಿಸಿದ್ದರು.

ಈಗ ಈ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಎನ್‌ಸಿಬಿ ಮೇಲೆ ಒತ್ತಡ ಹೇರಲು ಮಲಿಕ್‌ ಯತ್ನಿಸುತ್ತಿದ್ದಾರೆ ಎಂದು ಮೂಲಗಳು
ಹೇಳಿವೆ.

‘ಎನ್‌ಸಿಬಿಯ ಅನಾಮಧೇಯ ಅಧಿಕಾರಿಯೊಬ್ಬರು ಈ ಪತ್ರವನ್ನು ನನಗೆ ಕಳುಹಿಸಿದ್ದಾರೆ. ಇದೊಂದು (ಆರ್ಯನ್‌ ಪ್ರಕರಣ) ಸುಳ್ಳು ಪ್ರಕರಣವಾಗಿದ್ದು, ಹಲವು ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ಪಂಚನಾಮೆಯನ್ನು ಎನ್‌ಸಿಬಿ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ’ ಎಂದು ನವಾಬ್ ಮಲಿಕ್ ಅವರು ಆಗ್ರಹಿಸಿದ್ದಾರೆ.

‘ನನಗೆ ಪತ್ರ ಬರೆದಿರುವ ಅಧಿಕಾರಿಯು ಎನ್‌ಸಿಬಿಯ ಮುಂಬೈ ವಲಯ ಕಚೇರಿಯಲ್ಲಿ ಎರಡು ವರ್ಷಗಳಿಂದ ಸೇವೆಯಲ್ಲಿದ್ದಾರೆ. ಸಮೀರ್ ವಾಂಖೆಡೆ ಅವರಿಗೆ ಪ್ರಚಾರದ ಹುಚ್ಚು ಎಂದು ಅವರು ಆರೋಪಿಸಿದ್ದಾರೆ’ ಎಂದು ಮಲಿಕ್ ಹೇಳಿದ್ದಾರೆ.

ಈ ಪತ್ರದ ಪ್ರತಿಯನ್ನು ಮಲಿಕ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಬಿ ಪ್ರಧಾನ ನಿರ್ದೇಶಕ ಎನ್‌.ಎನ್‌.ಪ್ರಧಾನ್ ಅವರಿಗೆ ಸಲ್ಲಿಸಿದ್ದಾರೆ. ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಎನ್‌ಸಿಬಿ ಕೇಂದ್ರ ಕಚೇರಿಯು ಈ ಪತ್ರವನ್ನು ಸ್ವೀಕರಿಸಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದಷ್ಟೇ ಹೇಳಿದೆ.

‘ನಾನು ಎನ್‌ಸಿಬಿ ವಿರುದ್ಧ ಹೋರಾಡುತ್ತಿಲ್ಲ. ಜನರಿಂದ ಹಣ ವಸೂಲಿ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಹೋರಾಡುತ್ತಿದ್ದೇನೆ. ನನ್ನ ಅಂದಾಜಿನ ಪ್ರಕಾರ ಆತ ₹1,000 ಕೋಟಿ ವಸೂಲಿ ಮಾಡಿರಬಹುದು. ಎನ್‌ಸಿಬಿ ಈಗಾಗಲೇ ತನಿಖೆ ಆರಂಭಿಸಿದೆ. ಆದರೆ ಈಗಿನ ಆರೋಪದ ಬಗ್ಗೆಯೂ ಗಮನ ನೀಡಬೇಕು. ವಂಚಿಸಿ, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಕೆಲಸ ಗಿಟ್ಟಿಸಿಕೊಂಡ ವ್ಯಕ್ತಿಯ ವಿರುದ್ಧ ಮಾತ್ರ ಹೋರಾಡುತ್ತಿದ್ದೇನೆ’ ಎಂದು ಮಲಿಕ್‌ ಹೇಳಿದ್ದಾರೆ.

‘ಸಮೀರ್ ವಾಂಖೆಡೆ ನನ್ನ ಮತ್ತು ನನ್ನ ಕುಟುಂಬದವರ ಫೋನ್‌ಗಳನ್ನು ಕದ್ದಾಲಿಸಿದ್ದಾರೆ. ಇದು ಅಕ್ರಮ. ನನ್ನ ಮಗಳ ಕರೆ ವಿವರ ದಾಖಲೆಯನ್ನು (ಸಿಡಿಆರ್‌) ನೀಡುವಂತೆ ಮುಂಬೈ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅವರು ನಿರಾಕರಿಸಿದ್ದಾರೆ. ಆದರೆ ಇತರರನ್ನು ಬಳಸಿಕೊಂಡು ಫೋನ್‌ ಕರೆ ಕದ್ದಾಲಿಸಿದ್ದಾರೆ. ವಾಂಖೆಡೆ ಬಾಲಿವುಡ್‌ನ ಅತಿಗಣ್ಯರ ಫೋನ್‌ಕರೆಗಳನ್ನೂ ಕದ್ದಾಲಿಸಿದ್ದಾರೆ’ ಎಂದು ಮಲಿಕ್ ಆರೋಪಿಸಿದ್ದಾರೆ.

---

ಇದು ಅಡುಗೆಮನೆ ರಾಜಕಾರಣ:ನವಾಬ್ ಮಲಿಕ್ ವಿರುದ್ಧ ಎನ್‌ಸಿಬಿ ಅಧಿಕಾರಿ ಪತ್ನಿ ಆಕ್ರೋಶ

ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಲಂಚ ಮತ್ತು ಜಾತಿ ಪ್ರಮಾಣ ಪತ್ರ ತಿರುಚಿದ ಆರೋಪ ಮಾಡುತ್ತಿರುವ ಸಚಿವ ನವಾಬ್ ಮಲಿಕ್ ವಿರುದ್ಧ, ಸಮೀರ್ ಅವರ ಕುಟುಂಬವು ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ಜತೆಗೆ, 'ನವಾಬ್ ಮಲಿಕ್ ಮಾಡುತ್ತಿರುವುದು ಅಡುಗೆಮನೆ ರಾಜಕಾರಣ. ಇದರಿಂದ ಏನನ್ನೂ ಸಾಧಿಸಲು ಆಗುವುದಿಲ್ಲ' ಎಂದು ಸಮೀರ್ ವಾಂಖೆಡೆ ಪತ್ನಿ ಮತ್ತು ತಂಗಿ ಹರಿಹಾಯ್ದಿದ್ದಾರೆ.

ಸಮೀರ್ ವಾಂಖೆಡೆ ಅವರ ಪತ್ನಿ ಕ್ರಾಂತಿ ರೇಡ್ಕರ್ ಮತ್ತು ತಂಗಿ ಯಾಸ್ಮಿನ್ ವಾಂಖೆಡೆ ಅವರು, 'ಸಮೀರ್ ವಾಂಖೆಡೆ ಹಿಂದೂ ಎಂಬುದನ್ನು ನಾವು ಹೇಳುತ್ತಲೇ ಇದ್ದೇವೆ. ಈಗ ನಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳೆಲ್ಲವೂ ಅತ್ಯಂತ ಕೀಳು ಮಟ್ಟದವು. ಇದು ಅಡುಗೆಮನೆ ರಾಜಕಾರಣವಲ್ಲದೆ ಮತ್ತೇನಲ್ಲ. ನಮ್ಮ ಕುಟುಂಬದ ಮಹಿಳೆಯರನ್ನೂ ಗುರಿ ಮಾಡಿಕೊಂಡು ಅವಹೇಳನ ಮಾಡಲಾಗುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.

'ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ನಾವು ಹೆದರುವುದಿಲ್ಲ. ಸತ್ಯ ಹೊರಗೆ ಬರಲಿದೆ. ನೀರಿನ ಅಲೆಯ ವಿರುದ್ಧ ಈಜುವಾಗ ಮುಳುಗುವ ಅಪಾಯವಿರುತ್ತದೆ. ಆದರೆ ದೈವ ನಮ್ಮ ಜತೆಗಿರುತ್ತದೆ. ದೈವ ನಮ್ಮ ಜತೆಗಿದ್ದರೆ, ಎಂತಹ ದೊಡ್ಡ ಅಲೆಯೂ ನಮ್ಮನ್ನು ಮುಳುಗಿಸುವುದಿಲ್ಲ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT